 ಭಾರತದ ನಗರ ಸಮಸ್ಯೆ

ನಗರಗಳು ಇಂದಿನ ಆಧುನಿಕ ಮಾನವ ಸಮಾಜದ ಕೇಂದ್ರ ಬಿಂದುಗಳಾಗಿವೆ. ನವ ನಾಗರಿಕತೆಯ ಎಲ್ಲ ಬಗೆಯ ಚಟುವಟಿಕೆಗಳಿಗೆ ನೆಲೆವೀಡಾಗಿದೆ. ಡಬ್ಲೂ. ಬಿ ಮನ್ರೊ ಅವರ ಪ್ರಕಾರ, ವಿಶಿಷ್ಟ ಲಕ್ಷಣಗಳಿಂದ ಕೂಡಿ, ಒಂದು ಸೀಮಿತ ಸ್ಥಳದಲ್ಲಿ ಒಟ್ಟಾಗಿ ಸೇರಿ, ಜನ ನಿಬಿಡತೆಯ ಕಾರಣದಿಂದ ಉದ್ಭವಿಸುವ ಅಸಂಖ್ಯಾತ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ನಿರತರಾಗಿರುವ ವ್ಯಕ್ತಿಗಳ ಬೃಹತ್ ಸಮೂಹವೇ ನಗರ. ನಗರವೂ ಒಂದು ಜೀವನಕ್ರಮ ಎಂಬುದು ಕೆಲವರ ಅಭಿಪ್ರಾಯ.

ಭಾರತ ಹಳ್ಳಿಗಳ ದೇಶವಾಗಿದ್ದರೂ ಪ್ರಾರಂಭದಿಂದಲೂ ಇಲ್ಲಿ ನಗರಗಳು ಇದ್ದುವು ಎಂಬುದು ಗಮನಾರ್ಹ. ಸಿಂಧೂನದಿ ಕಣಿವೆ ಪ್ರದೇಶದಲ್ಲಿ ಒಂದು ನಗರ ನಾಗರಿಕತೆ ಬೆಳೆದಿತ್ತು. ಪ್ರಾಚೀನ ಸಂಶೋಧಕರಿಂದ ಬೆಳಕು ಕಂಡ ಹರಪ್ಪ ಮೊಹೆಂಜೊದಾರೊ ಪಟ್ಟಣಗಳು; ಮೆಗಸ್ತನೀಸ್, ಚೀನೀ ಯಾತ್ರಿಕರು ಮತ್ತು ಇತರರು ಪ್ರಶಂಸಿಸಿ ವರ್ಣಿಸಿರುವ ಪಾಟಲಿಪುತ್ರ, ವಿಜಯನಗರ, ನಲಂದ, ತಕ್ಷಶಿಲೆ, ಉಜ್ಜಯನಿ ಮುಂತಾದ ನಗರಗಳು ಸುಪ್ರಸಿದ್ಧ ಶೈಕ್ಷಣಿಕ ಹಾಗೂ ಸುಂದರ ಕಲಾತ್ಮಕ ಕೇಂದ್ರಗಳಾಗಿದ್ದುವು. ಬ್ರಿಟಿಷರ ಆಳ್ವಿಕೆಗೆ ಮೊದಲು ಭಾರತದಲ್ಲಿ ರಾಜಕೀಯವಾಗಿ ಪ್ರಮುಖವಾಗಿದ್ದ ನಗರಗಳು; ಧಾರ್ಮಿಕವಾಗಿ ಪ್ರಧಾನವಾಗಿದ್ದ ನಗರಗಳು, ಮತ್ತು ಪ್ರಗತಿಪರ ಕೈಗಾರಿಕೆ ಹಾಗೂ ವ್ಯಾಪಾರಗಳಿಗೆ ಕೇಂದ್ರಗಳಾಗಿದ್ದ ನಗರಗಳು ಎಂಬುದಾಗಿ ಮೂರು ಬಗೆಯ ನಗರಗಳಿದ್ದುವು. ನಗರಗಳು ಸಮಗ್ರ ಸಂಸ್ಕøತಿಗೆ ಪ್ರತಿನಿಧಿಗಳಾಗಿದ್ದ ಕಲೆಗಾರರು, ದಾರ್ಶನಿಕರು, ಕವಿಗಳು, ಔದ್ಯೋಗಿಕ ಪರಿಣತರು ಮುಂತಾದವರಿಗೆ ಆಶ್ರಯಸ್ಥಾನವಾಗಿದ್ದವು. ಮತ್ತು ಉಚ್ಛ್ರಾಯಸ್ಥಿತಿಯಲ್ಲಿದ್ದ ಸಾಂಸ್ಕøತಿಕ ಜೀವನಕ್ಕೆ ಕೇಂದ್ರವಾಗಿದ್ದವು.

ಬ್ರಿಟಿಷರ ಆಳ್ವಿಕೆ ಆರಂಭವಾದ ಮೇಲೆ ತೀವ್ರವಾದ ಬದಲಾವಣೆಗಳು ಉಂಟಾಗಿ ಬ್ರಿಟಿಷರ ಸ್ವಾರ್ಥಪರ ನೀತಿ ಹಾಗೂ ಸ್ಥಳೀಯ ರಾಜ್ಯಗಳ ಅವನತಿಯ ಕಾರಣ ನಗರ ಕೈಗಾರಿಕೆಗಳು ನಶಿಸಿ ಹೋಗಿ, ಯಂತ್ರಗಳ ಮೇಲೆ ಆಧಾರಿತವಾಗಿದ್ದ ಆಧುನಿಕ ಕೈಗಾರಿಕೆಗಳು ಸ್ಥಾಪಿತವಾಗಿ ಕೈಗಾರಿಕೀಕರಣದ ಪ್ರಕ್ರಿಯೆ ಪ್ರಬಲವಾಯಿತು. ಇದರ ಫಲವಾಗಿ ಮುಂಬಯಿ, ಮದರಾಸು, ಕಲ್ಕತ್ತ ಮುಂತಾದ ಮಹಾನಗರಗಳು ನವನಾಗರಿಕತೆಯ ಕೇಂದ್ರಗಳಾಗಿ ಬೆಳೆದವು. ಇತ್ತೀಚಿನ ದಶಕಗಳಲ್ಲಿ ನಗರಗಳು ಸಮರ್ಪಕ ಯೋಜನೆ ಹಾಗೂ ಮಾರ್ಗದರ್ಶನವಿಲ್ಲದೆ ಅತಿಯಾಗಿ ಬೆಳೆಯುತ್ತಿವೆ. ಇದರಿಂದಾಗಿ ಅನೇಕ ಕ್ಲಿಷ್ಟ ಸಮಸ್ಯೆಗಳು ತಲೆದೋರಿವೆ.

ಜನಬಾಹುಳ್ಯ ಇಂದು ಭಾರತನಗರಗಳ ಪ್ರಧಾನ ಸಮಸ್ಯೆ. ನಗರಗಳಲ್ಲಿ ಕಂಡುಬರುವ ಉದ್ಯೋಗಾವಕಾಶ, ಮನರಂಜನೆ, ವ್ಯಾಪಾರೋದ್ಯಮಕ್ಕೆ ಅನುಕೂಲ, ಶಿಕ್ಷಣ ಸೌಲಭ್ಯ ಮುಂತಾದ ಸೌಕರ್ಯಗಳಿಂದ ಆಕರ್ಷಿತರಾಗಿ ಗ್ರಾಮಸ್ಥರು ಹಳ್ಳಿಗಳಿಂದ ನಗರಕ್ಕೆ ವಲಸೆ ಬರುತ್ತಿದ್ದಾರೆ. ನಗರದಲ್ಲಿಯೇ ಸ್ಥಿರವಾಗಿ ನೆಲಸದೆ ದಿನ ಬಂದು ಹೋಗುವ ಜನರ ಹಾಗೂ ಪ್ರವಾಸಿಗರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಇದರಿಂದ ನಗರದ ಜನಸಂಖ್ಯೆ ಹೆಚ್ಚಿ, ಇನ್ನೂ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಜನಸಂಖ್ಯೆ ಹೆಚ್ಚಾಗಿರುವುದರ ಜೊತೆಗೆ ತಲೆಎತ್ತಿಕೊಂಡಿರುವ ಇನ್ನೊಂದು ಸಮಸ್ಯೆ ಎಂದರೆ ನಿರುದ್ಯೋಗ ಹಾಗೂ ಬಡತನ. ಉದ್ಯೋಗಗಳ ಸಂಖ್ಯೆ ಕಡಿಮೆ. ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಅಧಿಕ. ಭಾರತದ ನಗರಗಳಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಇದರ ಫಲವಾಗಿ ಅನೇಕರು ಬಡತನದಿಂದ ಬಳಲುತ್ತಿದ್ದಾರೆ. ಅನೇಕರಿಗೆ ಆಹಾರ, ಉಡುಪು, ವಸತಿ ಮುಂತಾದ ಮೂಲಭೂತ ಆವಶ್ಯಕತೆಗಳನ್ನು ಪೂರೈಸುವುದು ಸಾಧ್ಯವಾಗದೆ ಜೀವನ ದುರ್ಭರವಾಗಿ, ಉತ್ಸಾಹಹೀನರಾಗಿ ಬಾಳುತ್ತಿದ್ದಾರೆ. ಬಡವರು ನಗರದಲ್ಲಿ ವಾಸಕ್ಕೆ ಯೋಗ್ಯವಲ್ಲದ ಮನೆಗಳಲ್ಲಿ ವಾಸಮಾಡಬೇಕಾಗುತ್ತದೆ. ಯಾವ ಬಗೆಯ ಸೌಕರ್ಯಗಳೂ ಇಲ್ಲದೆ, ಅನಾರೋಗ್ಯ ಹಾಗೂ ಅನೀತಿಗಳಿಗೆ ಕೇಂದ್ರವಾದ ಕೊಳಚೆ ಪ್ರದೇಶಗಳಲ್ಲಿರುವ ಮನೆಗಳಲ್ಲಿ ಅವರು ಬಾಳಬೇಕಾಗುತ್ತದೆ. ಹೀಗೆ ಕೊಳೆಗೇರಿಗಳು ನಗರದ ಮತ್ತೊಂದು ಸಮಸ್ಯೆಯಾಗಿ ಪರಿಣಮಿಸಿವೆ. ಅತೀವ ಜನಸಂದಣಿಯಿಂದ ಕೂಡಿ, ಶಿಥಿಲವಾಗಿರುವ, ಅನಾರೋಗ್ಯವಾಗಿರುವ ಮತ್ತು ಅಲ್ಲಿ ವಾಸಿಸುವ ವ್ಯಕ್ತಿಗಳ ಆರೋಗ್ಯ, ರಕ್ಷಣೆ ಪೋಷಣೆ ಬೆಳೆವಣಿಗೆ, ನೀತಿ ಹಾಗೂ ಕ್ಷೇಮಾಭ್ಯುದಯಕ್ಕೆ ಕಂಟಕಪ್ರಾಯವಾಗಿರುವ ಹಾಗೂ ನೀರು ಗಾಳಿ. ಬೆಳಕು ಮುಂತಾದ ಯಾವ ವಿಧವಾದ ಮೂಲಭೂತ ಸೌಕರ್ಯಗಳೂ ಇಲ್ಲದ ವಾಸಗೃಹಗಳಿಂದ ಕೂಡಿರುವ ಕೊಳೆಗೇರಿಗಳು ನಗರದ ಸೌಂದರ್ಯಕ್ಕೆ ಕುಂದು ಹಾಗೂ ನಗರದ ವಿಕಾಸಕ್ಕೆ ದೊಡ್ಡ ತಡೆಯಾಗಿವೆ. ಇವು ಅನೇಕ ಬಗೆಯ ಸಮಸ್ಯೆಗಳಿಗೆ ಉಗಮಸ್ಥಾನ. ಬಡತನಕ್ಕೆ ಇವು ತವರುಮನೆ. ಕೆಲವರು ಆದಾಯದ ವಿಚಾರದಲ್ಲಿ ಮಾತ್ರವಲ್ಲದೆ, ಅರ್ಹತೆಯಲ್ಲೂ ಬಡವನಾಗಿರುವವರ ವಾಸಸ್ಥಳವಾಗಿರುವ ಈ ಕೊಳೆಗೇರಿಗಳಲ್ಲಿ ಮೈ ತುಂಬ ಬಟ್ಟೆ ಹಾಗೂ ಹೊಟ್ಟೆ ತುಂಬ ಅನ್ನವಿಲ್ಲದೆ ತಕ್ಕ ದೈಹಿಕ ಹಾಗೂ ಮಾನಸಿಕ ಬೆಳೆವಣಿಗೆ ಇಲ್ಲದ ಮಕ್ಕಳ ಗುಂಪೇ ಇರುತ್ತದೆ. ಕೊಳಚೆ ಪ್ರದೇಶಗಳು ಭಿಕ್ಷುಕರು ಬಾಲಾಪರಾಧಿ, ಅಪರಾಧಿ, ಕುಡುಕ, ವೇಶ್ಯೆ ಮುಂತಾದ ಎಲ್ಲ ಸಮಾಜವಿರೋಧಿಗಳ ಕೇಂದ್ರವಾಗಿ ಇದ್ದು ಸಾಮಾಜಿಕ ಅವ್ಯವಸ್ಥೆಯ ಪ್ರತಿರೂಪವಾಗಿದೆ.

ಮದ್ಯಪಾನ ಹಾಗೂ ವೇಶ್ಯಾವೃತ್ತಿ ಭಾರತದ ನಗರಗಳ ಪ್ರಮುಖ ಸಮಸ್ಯೆಗಳಲ್ಲಿ ಸೇರಿವೆ. ಕಾರ್ಖಾನೆಗಳಲ್ಲಿ ದಿನವಿಡೀ ದುಡಿಯುವ ಜನ ಹಾಗೂ ತಮ್ಮ ಪತ್ನಿಮಕ್ಕಳನ್ನು ದೂರ ಪ್ರದೇಶಗಳಲ್ಲಿ ಬಿಟ್ಟು ತಾವೇ ಬೇರೆ ಬೇರೆ ಇರುವ ಕಾರ್ಮಿಕರು ದುಡಿತದಿಂದ ಆಗುವ ದಣಿವನ್ನು ಕುಡಿತದಿಂದ ಶಮನ ಮಾಡಿಕೊಳ್ಳಲು ಪ್ರಾರಂಭಿಸಿ ಅದೇ ದುಶ್ಚಟವಾಗಿ ಪರಿಣಮಿಸುತ್ತದೆ. ವಿದೇಶಿ ಮದ್ಯವನ್ನು ಕುಡಿಯುವ ಹಂಬಲ ಹೆಚ್ಚಾಗಿದೆ. ಮದ್ಯಪಾನ ಮತ್ತು ಧೂಮಪಾನ ಮಾಡಿದರೆ ತಮ್ಮ ಗೌರವ, ಘನತೆ ಅಂತಸ್ತು ಹೆಚ್ಚುತ್ತವೆಂದು ಭಾವಿಸುವ ಅನೇಕ ವ್ಯಕ್ತಿಗಳು ಉಂಟು ಕೆಲವು ಸಂತೋಷಕೂಟಗಳಲ್ಲಿ ಮದ್ಯಪಾನ ಕಡ್ಡಾಯವಾಗಿರುವಂತೆ ಕಂಡುಬರುತ್ತಿದೆ. ಈ ಅಪಾಯಕಾರಿ ಚಟವನ್ನು ತಡೆಗಟ್ಟಲು ಯುಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಮದ್ಯಪಾನವಾದ ಮೇಲೆ ವ್ಯಕ್ತಿ ಕೆಲವೊಮ್ಮೆ ವೇಶಾಗೃಹಗಳಿಗೆ ಭೇಟಿಕೊಡುವುದುಂಟು. ನಗರದಲ್ಲಿ ಸೂಳೆಗಾರಿಕೆ ಒಂದು ಲಾಭದಾಯಕ ಉದ್ಯೋಗ. ಕಾಮೋದ್ರೇಕಗೊಳಿಸುವ ಅಶ್ಲೀಲ ನೃತ್ಯಗಳಿಗೆ ಅವಕಾಶವಿರುವ ರಾತ್ರಿವಿಹಾರ ಮಂದಿರಗಳಲ್ಲಿ, ಗೌರವಾರ್ಹವಾಗಿರುವಂತೆ ಕಂಡುಬರುವ ದೊಡ್ಡ ಹೋಟಲು ಮುಂತಾದ ಸ್ಥಳಗಳಲ್ಲಿ, ಕೀಳು ದರ್ಜೆಯ ಮದ್ಯದಂಗಡಿಗಳಲ್ಲಿ ವೇಶ್ಯಾವೃತ್ತಿಯನ್ನು ಯಾವ ಅಡೆತಡೆಗಳೂ ಇಲ್ಲದೆ ಬಹಿರಂಗವಾಗಿಯೇ ನಡೆಯುತ್ತದೆ. ವೇಶ್ಯೆಯರನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡು, ಬಲಾತ್ಕಾರದಿಂದ ಅನೇಕ ಮುಗ್ಧ ಹೆಣ್ಣು ಮಕ್ಕಳನ್ನು ಸೂಳೆಯರನ್ನಾಗಿಸಿ ಅವರ ಮುಖಾಂತರ ಹೊಟ್ಟೆ ಹೊರೆಯುವ ಸೋಮಾರಿ ಜನರಿಗೇನೂ ಕೊರತೆ ಇಲ್ಲ. ವೇಶ್ಯಾಸಮಸ್ಯೆ ಇಂದು ವ್ಯವಸ್ಥಿತ ಸಂಸ್ಥೆಯಾಗಿರುವುದು ಸಮಾಜಕ್ಕೆ ದೊಡ್ಡ ಅಪಾಯ. ಈ ಸಮಸ್ಯೆ ಕೌಟುಂಬಿಕ ಹಾಗೂ ಸಮುದಾಯದ ಅವ್ಯವಸ್ಥೆಗೆ ಮೂಲಕಾರಣ. ಇದರ ವಿರುದ್ಧ ಎಷ್ಟೇ ಕಾನೂನುಗಳನ್ನು ಜಾರಿಗೆ ತಂದರೂ, ಅತ್ಯಾಚಾರಗಳು ಕಾನೂನಿನ ಮುಸುಕಿನಲ್ಲಿಯೇ ನಡೆಯುತ್ತದೆ. ನಗರ ಜನರ ಆರೋಗ್ಯಕೆಡಿಸಿ ಅವರನ್ನು ನೀತಿಭ್ರಷ್ಟರನ್ನಾಗಿಸುವ ವೇಶ್ಯಾ ಸಮಸ್ಯೆ ಭಯಂಕರ ಸಾಮಾಜಿಕ ಜಾಡ್ಯ.

ಭಿಕ್ಷಾವೃತ್ತಿ, ಭಾರತದ ನಗರಗಳಲ್ಲಿಯ ಇನ್ನೊಂದು ಸಾಮಾಜಿಕ ವ್ಯಾಧಿ. ಮಾರುಕಟ್ಟೆ, ರೈಲ್ವೆ ಹಾಗೂ ಬಸ್ ನಿಲ್ದಾಣಗಳಲ್ಲಿ ದೇವಾಲಯ ಹಾಗೂ ವಾಸಗೃಹಗಳ ಮುಂದೆ ಕೊಳಕಾಗಿರುವ ಚಿಂದಿಬಟ್ಟೆಗಳನ್ನು ಧರಿಸಿ ಕೈಚಾಚಿ ಭಿಕ್ಷೆ ಬೇಡುತ್ತಿರುವ ವ್ಯಕ್ತಿಗಳನ್ನು ನೋಡಬಹುದು. ಬಡತನ, ನಿರುದ್ಯೋಗ, ಕೌಟುಂಬಿಕ ವಿಘಟನೆ, ವ್ಯಾಧಿ ಮತ್ತು ಅಂಗವಿಕಲತೆ ಮತ್ತು ಧಾರ್ಮಿಕ ವಿಷಯ ಮುಂತಾದ ಅಂಶಗಳು ಭಿಕ್ಷಾವೃತ್ತಿಗೆ ಕಾರಣ. ದಾನ ಮಾಡುವುದರಿಂದ ಪುಣ್ಯ ಲಭ್ಯವಾಗುತ್ತದೆ ಎಂಬ ನಂಬಿಕೆಯಿಂದ ಅನೇಕರು ಭಿಕ್ಷೆ ನೀಡಿ ಭಿಕ್ಷಾವೃತ್ತಿಯನ್ನು ಹೆಚ್ಚಾಗಿ ಪ್ರೋತ್ಸಾಹಿಸುತ್ತಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಲ್ಲಿ ಕೆಲವರು ದುಶ್ಚಟಗಳಿಂದ ತಮ್ಮ ಆಸ್ತಿಪಾಸ್ತಿಗಳನ್ನು ಹಾಳುಮಾಡಿಕೊಂಡು ರಕ್ಷಕರಿಲ್ಲದೆ ನಿರ್ಗತಿಕರಾಗಿ ನಗರಕ್ಕೆ ಬಂದು ಭಿಕ್ಷಾಟನೆಗೆ ಇಳಿಯುತ್ತಾರೆ. ಮತ್ತೆ ಕೆಲವರು ಅಂಗಾಗಗಳು ಸರಿಯಾಗಿದ್ದರೂ ಕೆಲಸ ಮಾಡದೆ, ಮೈಗಳ್ಳರಾಗಿ ಭಿಕ್ಷಾವೃತ್ತಿ ಸಂಪಾದನೆಯ ಸುಲಭ ಮಾರ್ಗವೆಂದು ಅರಿತು ಅದನ್ನೇ ಒಂದು ಕಸುಬನ್ನಾಗಿಸಿಕೊಂಡು, ಅದರಲ್ಲಿ ಪ್ರವೀಣರಾಗಿ ನಗರಜೀವನಕ್ಕೆ ಕಳಂಕಪ್ರಾಯರಾಗಿ ಇದ್ದಾರೆ. ಕೆಲವರು ಮಕ್ಕಳನ್ನು ಹೊತ್ತುಕೊಂಡು ಹೋಗಿ, ಅವರನ್ನು ಅಂಗವಿಕಲರನ್ನಾಗಿಸಿ ಬಾಲ ಭಿಕ್ಷುಕರನ್ನಾಗಿ ಮಾರ್ಪಡಿಸಿ ಅವರ ಸಂಪಾದನೆಯ ಮೂಲಕ ಜೀವಿಸುತ್ತಾರೆ. ಭಿಕ್ಷುಕರ ವೇಷದಲ್ಲಿ ಕಳ್ಳತನ, ದರೋಡೆ ಖೂನಿ ಮಾಡುವವರಿದ್ದಾರೆ. ಭಿಕ್ಷುಕರನೇಕರು ಕೆಲವು ಅಂಟು ಜಾಡ್ಯಗಳಿಂದ ನರಳುತ್ತಿರುವುದರಿಂದ, ಅವರು ನಗರದಲ್ಲಿ ಎಲ್ಲ ಕಡೆ ರೋಗಗಳನ್ನು ಹರಡಿ ಜನರ ಆರೋಗ್ಯ ಹಾಳುಮಾಡುತ್ತಾರೆ ಹಾಗೂ ವ್ಯಭಿಚಾರಿಗಳೂ ಆಗಿರುವುದರಿಂದ ಸಾಮಾಜಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ಭಿಕ್ಷಾವೃತ್ತಿಯನ್ನು ಸರ್ಕಾರ ನಿಷೇಧಿಸಿದ್ದರೂ ಕೆಲವು ಧಾರ್ಮಿಕ ಸೋಗಿನಲ್ಲಿ ಮುಂದುವರಿದುಕೊಂಡು ಬರುತ್ತಿದೆ. ಅಂಗವಿಕಲರು, ರೋಗಿಗಳು, ಜನರ ದಯೆಯಿಂದಾಗಿ ಬದುಕುತ್ತಿದ್ದಾರೆ. ಭಿಕ್ಷೆ ಬೇಡುವ ಮಂದಿ ನಾನಾವಿಧವಾಗಿ, ದೇವರ ಹೆಸರು ಬಳಸಿಕೊಂಡು ಮುಗ್ಧಜನರನ್ನು ಸುಲಿಯುವುದುಂಟು, ಕಾನೂನು ನಿಷೇಧವಿದ್ದರೂ ಭಿಕ್ಷಾಟನೆಯನ್ನು ಸಂಪೂರ್ಣ ತೊಡೆದುಹಾಕಲಾಗದೆ ಅದೂ ಒಂದು ಸಮಸ್ಯೆಯಾಗಿ ಪರಿಣಮಿಸಿದೆ.

ವಿವಿಧ ಅಪರಾಧ ನಗರಗಳ ಮತ್ತೊಂದು ಸಮಸ್ಯೆ. ಕಾನೂನುಗಳನ್ನು ತಿಳಿದೋ ತಿಳಿಯದೆಯೋ ಉಲ್ಲಂಘಿಸುವುದು ಸಾಮಾನ್ಯವಾಗಿದೆ. ಸಾಮಾನ್ಯವಾಗಿ ಸಮಾಜ ವಿರೋಧಿ ಕೃತ್ಯವನ್ನು ಅಪರಾಧ ಎಂಬುದಾಗಿ ಎಣಿಸಲಾಗಿದೆ. ಕೆಲವು ಮಾನಸಿಕ ಹಾಗೂ ದೈಹಿಕ ದೌರ್ಬಲ್ಯಗಳ ಕಾರಣ, ಕೌಟುಂಬಿಕ ಅವ್ಯವಸ್ಥೆ. ಬಡತನ, ನಿರುದ್ಯೋಗ, ಸಾಮಾಜಿಕ ಹಾಗೂ ಭೌಗೋಳಿಕ ಬದಲಾವಣೆ ಮತ್ತು ಸಹವಾಸ ದೋಷ ಮುಂತಾದ ಅನೇಕ ಕಾರಣಗಳಿಂದ ವ್ಯಕ್ತಿ ಅಪರಾಧ ಮಾಡುತ್ತಾನೆ. ಗೂಂಡಾಗಿರಿ, ಖೂನಿ, ಕಳ್ಳತನ, ದಗಾ, ಮೋಸ, ಸುಳ್ಳುಪತ್ರ, ಖೋಟಾ ನಾಣ್ಯ ಹಾಗೂ ಖೋಟಾ ವಸ್ತುಗಳನ್ನು ತಯಾರಿಸುವುದು, ಆಹಾರ, ಪಾನೀಯ ಹಾಗೂ ಔಷಧಿಗಳ ಕಲಬೆರೆಕೆ ಮಾಡುವುದು, ಸಮುದ್ರಗಳ್ಳತನ, ಕಳ್ಳಸಾಗಣೆ, ಸುಂಕಗಳ್ಳತನ ಮುಂತಾದ ಇನ್ನೂ ಅನೇಕ ಅಪರಾಧಗಳನ್ನು ಹೆಸರಿಸಬಹುದು. ಹಣವಂತರೂ ತಿಳಿದ ಮಂದಿಯೂ ಮಾಡುವ ಅಪರಾಧ ನಗರಗಳಲ್ಲಿ ತೀವ್ರವಾಗುತ್ತಿದೆ. ಭ್ರಷ್ಟಾಚಾರ, ಲಂಚಗುಳಿತನ ಎಲ್ಲೆಲ್ಲೂ ಕಂಡುಬರುತ್ತಿವೆ. ಹಣವಂತರು, ಶಿಕ್ಷೆ ತಪ್ಪಿಸಿಕೊಳ್ಳಬಹುದಾಗಿದೆ. ಅನುಸರಿಸುವ ಕ್ರಮ ಒಳ್ಳೆಯದೋ ಕೆಟ್ಟದೋ ಅದು ಗೌಣ. ಹೇಗಾದರೂ ಹಣ ಸಂಪಾದನೆ ಶ್ರೀಮಂತರಾಗಬೇಕೆಂಬ ಹೆಬ್ಬಯಕೆ ಇಂದು ನಗರ ನಿವಾಸಿಗಳಲ್ಲಿ ಪ್ರಬಲವಾಗುತ್ತಿದೆ. ಜೀವನಮಟ್ಟ ಹೆಚ್ಚಿ ಆವಶ್ಯಕ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವುದರಿಂದ ಜೀವನ ಸಾಗಿಸಲು ಪತಿಪತ್ನಿಯರಿಬ್ಬರೂ ಮನೆಯ ಹೊರಗಡೆ ದುಡಿಯಬೇಕಾಗುತ್ತದೆ. ಆದ್ದರಿಂದ ಮನೆಗಳಲ್ಲಿ ಮಕ್ಕಳಿಗೆ ಸರಿಯಾದ ಪಾಲನೆ ಪೋಷಣೆ ಇಲ್ಲದೆ ಅನೇಕರು ಬಾಲಾಪರಾಧಿಗಳಾಗುತ್ತಿದ್ದಾರೆ. ಅನೇಕ ಅವ್ಯವಸ್ಥಿತ ಹಾಗೂ ಸಮಸ್ಯಾತ್ಮಕ ಕುಟುಂಬಗಳು, ಮಕ್ಕಳು ಅಡ್ಡದಾರಿ ಹಿಡಿದು ಬಾಲಾಪರಾಧಿಗಳಾಗುವಂತೆ ಮಾಡುತ್ತಿವೆ. ಸಹವಾಸ ದೋಷ ಹಾಗೂ ನಗರದಲ್ಲಿರುವ ಕೆಟ್ಟ ಪರಿಸರ ಬಾಲಾಪರಾಧಕ್ಕೆ ಪೋತ್ಸಾಹ ನೀಡುತ್ತವೆ. ಸಾಧಾರಣವಾಗಿ ಮಕ್ಕಳು ಶಾಲೆಗಳ್ಳತನ, ಅಲೆಮಾರಿತನ, ಸಾಮಾನುಗಳ ಚೌರ್ಯ, ಜೇಬುಗಳ್ಳತನ, ಸುಲಿಗೆ, ದರೋಡೆ ಮುಂತಾದ ಅಪರಾಧಗಳನ್ನು ಮಾಡುತ್ತಾರೆ. ಕುಡಿತ, ಧೂಮಪಾನ, ಜೂಜು ಇವುಗಳ ಚಟಕ್ಕೆ ಬೀಳುತ್ತಾರೆ.

ಇಷ್ಟು ಮಾತ್ರವಲ್ಲದೆ ಭಾರತದ ನಗರಗಳಲ್ಲಿ ಸಾಕಷ್ಟು ಸಾರಿಗೆ ಸಂಪರ್ಕ, ವಸತಿ ಮತ್ತು ಶಿಕ್ಷಣ ಸೌಲಭ್ಯ, ವೈದ್ಯಕೀಯ ನೆರವು, ಕುಡಿಯುವ ಶುದ್ಧ ಜಲ ಪೂರೈಕೆ ಮುಂತಾದ ಮೂಲಭೂತ ಆವಶ್ಯಕತೆಗಳನ್ನು ಒದಗಿಸುವುದು ಸಾಧ್ಯವಾಗುತ್ತಿಲ್ಲ. ಈ ಬಗೆಯ ಬೇಡಿಕೆಗಳನ್ನು ಈಡೇರಿಸಲು ತಕ್ಕ ಹಣಕಾಸಿನ ನೆರವಿಲ್ಲದೆ ನಗರಜೀವನ ಅಸ್ತವ್ಯಸ್ತವಾಗುತ್ತಿದೆ. ನಗರ ಪರಿಸರವೂ ಹಿತಕರವಾಗಿಲ್ಲ. ಕಾರ್ಖಾನೆ ವಾಹನ ಇತ್ಯಾದಿಗಳಿಂದ ಹೊರಬೀಳುವ ವಿಷಪೂರಿತ ಅನಿಲಗಳು ವಾಯುಮಾಲಿನ್ಯಕ್ಕೆ ಮೂಲವಾಗಿ ಜನರ ಆರೋಗ್ಯ ಹದಗೆಡುತ್ತಿದೆ. ನಗರಗಳಲ್ಲಿಯ ಹೆಚ್ಚಿನ ಜನಸಂಖ್ಯೆ ಮತ್ತು ವಾಹನ ಹಾಗೂ ಯಂತ್ರೋಪಕರಣಗಳು ನೆಮ್ಮದಿಗೆ ಭಂಗ ತರುತ್ತಿವೆ. ಜೀವನ ಯಾಂತ್ರಿಕವಾಗುತ್ತಿದೆ. ಮುಂಜಾನೆಯಿಂದ ಇರುಳತನಕ ಸತತವಾಗಿ ದುಡಿಯಬೇಕಾಗಿರುವ ನಗರವಾಸಿಗೆ ನಿಜವಾದ ಸುಖಾನುಭವ ಕೇವಲ ಮರೀಚಿಕೆಯೇ ಆಗಿದೆ. ಪ್ರಾಥಮಿಕ ಬಾಂಧವ್ಯಗಳನ್ನು ಬೆಳೆಸಿಕೊಳ್ಳಲು ಸಾಕಷ್ಟು ಕಾಲಾವಕಾಶವಿಲ್ಲದಿರುವ ನಗರವಾಸಿಗೆ ನೆರೆಹೊರೆಯವರ ಪರಿಚಯವೇ ಇಲ್ಲದಂತಾಗಿದೆ. ನಗರವಾಸಿ ತಾನು ತನ್ನ ಪ್ರಪಂಚ ಎಂಬುದಾಗಿ ಇದ್ದುಕೊಂಡು ಸ್ವಾರ್ಥಪರವಾಗಿ ನಿಜವಾದ ಸುಖ ಸಂತೋಷದಿಂದ ವಂಚಿತನಾಗಿದ್ದಾನೆ. ಯಾಂತ್ರಿಕ ಜೀವನದ ಸುಳಿಯಲ್ಲಿ ಕೆಲವೊಂದು ಮಾನವ ಮೌಲ್ಯಗಳೆಲ್ಲ ನಶಿಸಿ ಹೋಗತ್ತಿವೆ. ವಿಜ್ಞಾನ ರಂಗದಲ್ಲಿ ಅದ್ಭುತ ಸಾಧನೆಗಳು ಕಂಡುಬಂದಿದ್ದರೂ ಸಾಮಾಜಿಕ, ಸಾಂಸ್ಕøತಿಕ ಮೌಲ್ಯಗಳನ್ನು ಮರೆತ ನಗರವಾಸಿ ನೆಮ್ಮದಿ, ಶಾಂತಿ, ಸಮೃದ್ಧಿ ಕಳೆದುಕೊಂಡಿದ್ದಾನೆ.

ಈ ನಗರ ಸಮಸ್ಯೆಗಳು ಭಾರತ ಒಂದಕ್ಕೇ ಸೀಮಿತವಾಗಿಲ್ಲ. ಎಲ್ಲೆಲ್ಲಿ ನಗರಗಳು ಇವೆಯೋ ಮತ್ತು ಬೆಳೆಯುತ್ತಿದೆಯೊ ಅಲ್ಲೆಲ್ಲ ಹೆಚ್ಚು ಕಡಿಮೆ ಇದೇ ಬಗೆಯ ಸಮಸ್ಯೆಗಳಿರುತ್ತವೆ. ಒಟ್ಟಿನಲ್ಲಿ ಭಾರತದ ನಗರ ಸಮಸ್ಯೆಗಳು ಹೆಚ್ಚಾಗತೊಡಗಿವೆ. ಅವಕ್ಕೆ ಮೂಲಕಾರಣ ಹೆಚ್ಚಿನ ಜನಸಂಖ್ಯೆ, ಸಂಪನ್ಮೂಲಗಳ ಮತ್ತು ಸಾಕಷ್ಟು ಹಣಕಾಸಿನ ಕೊರತೆ, ಇವುಗಳ ನಿವಾರಣೆಗೆ ಸಾಮಾಜಿಕ, ರಾಜಕೀಯ, ಸಾಂಸ್ಕøತಿಕ, ಶಿಕ್ಷಣ ಮತ್ತು ಆರ್ಥಿಕ ಶಕ್ತಿಗಳು ಒಟ್ಟುಗೂಡಿ ವೈಜ್ಞಾನಿಕವಾಗಿ ಆದಷ್ಟು ಹೆಚ್ಚುಕಾಲ ಇರುವ ಸುಧಾರಣೆಗಳನ್ನು ಮಾಡಬೇಕಾಗಿದೆ. ಯಾವುದೇ ಒಂದು ಕ್ಷೇತ್ರದ ಸುಧಾರಣೆ ನಗರ ಸಮಸ್ಯೆಗಳಿಗೆ ಪರಿಹಾರವಾಗದು.
(ಎಂ.ಬಿ.ಆರ್‍ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ